Jonah 2

ಯೋನನ ಪ್ರಾರ್ಥನೆ

1ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದು ಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು:

2<<ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು;
ಆತನು ನನಗೆ ಸದುತ್ತರವನ್ನು ದಯಪಾಲಿಸಿದನು;
ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ಕೂಗಿಕೊಂಡೆನು!
ಆಹಾ, ನೀನು ನನ್ನ ಸ್ವರವನ್ನು ಲಾಲಿಸಿದೆ.

3ನನ್ನನ್ನು ಸಮುದ್ರದ ಆಗಾಧಸ್ಥಳದಲ್ಲಿ ಹಾಕಿದಿಯಲ್ಲಾ;

ಪ್ರವಾಹವು ನನ್ನನ್ನು ಸುತ್ತಿಕೊಂಡಿತು;
ಲೆಕ್ಕವಿಲ್ಲದ ಸಮುದ್ರದ ಅಲೆಗಳೂ, ತೆರೆಗಳೂ ನನ್ನ ಮೇಲೆ ದಾಟಿ ಹೋದವು
4<ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದು ಕೊಂಡೆನು;
ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು? >

5ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಹಾನಿ ತಂದಿತು,

ಮಹಾಸಾಗರವು ನನ್ನನ್ನು ಆವರಿಸಿತು,
ಕಡಲಕಳೆಯು ಪಾಚಿಯೂ ನನ್ನ ತಲೆಯನ್ನು ಸುತ್ತಿಕೊಂಡಿತು.
6ಪರ್ವತಗಳ ತಳಹದಿಗೆ ಇಳಿದುಹೋದೆನು,
ಭೂಲೋಕದ ದ್ವಾರಗಳ ಚಿಳಕಗಳು ಎಂದಿಗೂ ತೆಗೆಯದ ಹಾಗೆ ನನ್ನನ್ನು ಬಂದಿಸಿದವು;
ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿನಿಂದ ಉದ್ಧರಿಸಿದ್ದೀ.


7<<ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು;

ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು.

8<<ನಿರ್ಜೀವ ವಿಗ್ರಹಗಳನ್ನು ಅವಲಂಬಿಸಿದವರು
ತಮ್ಮ ದೇವರ ಕರುಣಾನಿಧಿಯನ್ನು ತೊರೆದುಬಿಡುವರು.

9ಆದರೆ ನಾನು ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು,

ನಿನಗೆ ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು.
ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.>>

ಆದರೆ ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಕಾರಿಬಿಟ್ಟಿತು.

10

Copyright information for KanULB